Tuesday, July 10, 2007

ಅನಾಥಶವ - ಸಣ್ಣಕತೆ


ಬೀದಿಯಲ್ಲಿ ಬೋರಲಾಗಿ ಬಿದ್ದಿದ್ದ ಅನಾಥ ಶವದ ಸುತ್ತ ಸಕ್ಕರೆಯ ಸುತ್ತ ಇರುವೆಗಳು ಮುತ್ತಿಕೊಳ್ಳುವ ಹಾಗೇ ಮುತ್ತಿಕೊಂಡ ಜನರನ್ನು ನಾಯಿಗಳನ್ನು ಹಚಾ ಹಚಾ ಎಂದು ಓಡುಸುವಂತೆ ಪೊಲೀಸರು ಓಡಿಸುತ್ತಿದ್ದರು. ಶವದ ಮೇಲೆ ಒಂದಿಂಚೂ ಬಟ್ಟೆ ಇರಲಿಲ್ಲ. ಆದರೂ ಅಲ್ಲಿ ಜನ ನೆರೆದಿದ್ದರು. ಪರಿಪರಿ ಮಾತುಗಳನ್ನ ಆಡಿಕೊಳ್ಳುತ್ತಿದ್ದರು.
``ಇಂಥ ಬೋಳೀ ಮಕ್ಕಳು ಸತ್ತರೆ ಜನ ನೆಮ್ಮದಿಯಿಂದ ಬದುಕಬಹುದು''
``ಸೂಳೆಗಾರಿಕೆ ಮಾಡ್ಕೊಂಡಿದ್ನಂತೆ ಸೂಳೇಮಗ''
ಆದರೆ ತಮ್ಮತಮ್ಮಲಿಯೇ ಮಾತನಾಡಿಕೊಳ್ಳುತ್ತಿದ್ದರು. ಅವನ ಕಡೆಯವರಿಗೇನಾದರೂ ಕೇಳಿಸಿ ತಮಗೇನಾದರೂ ತೊಂದರೆಯಾದರೇ? ಆ ಅನಾಥಶವದ ಮುಖವನ್ನು ನೋಡಲೇಬೇಕು ಎಂಬ ಹಟ ನನ್ನದಾಗಿತ್ತು. ಮೊದಲೇ ಬೋರಲಾಗಿ ಬಿದ್ದಿತ್ತು. ಅದರ ಸುತ್ತ ಸುತ್ತಿದರೂ ಮುಖವನ್ನು ನೋಡಲು ಆಗಲಿಲ್ಲ. ಅಂದು ರಾತ್ರಿಯೆಲ್ಲಾ ನನಗೆ ಅಷ್ಟು ಸರಿಯಾಗಿ ನಿದ್ರೆ ಹತ್ತಲೇ ಇಲ್ಲ. ಬೆಳಗಿನ ಝಾವ ಮೂರಕ್ಕೋ ನಾಲ್ಕಕ್ಕೋ ಸ್ವಲ್ಪ ಮಂಪರು ಬಂದಿತ್ತು. ಆರಕ್ಕೇ ಎಚ್ಚರವಾಯಿತು. ಬಾಗಿಲು ತೆಗೆದು ಪೇಪರ್ ತೆಗೆದುಕೊಂಡು ಬಂದು ಅದೇ ಹಳಸಲಾದ ಸುದ್ದಿಗಳನ್ನ ಓದತೊಡಗಿದೆ.
``ರೈತರಿಗೆ ಸಾಲದ ಬಡ್ಡಿ ಮನ್ನ'' ಸಿ ಎಂ``ತುಮಕೂರು ಬಳಿ ಲಾರಿ - ಟೆಂಪೋ ಢಿಕ್ಕಿ - ೧೭ ಸಾವು, ೨೬ ಜನರಿಗೆ ಗಾಯ''``ರಾಜಾಜಿನಗರದಲ್ಲಿ ಢಕಾಯಿತರ ಗುಂಪನ್ನು ಹಿಡಿಯಲು ಪೊಲೀಸರಿ ಸಫಲ''
ಹೀಗೆ ಕೆಟ್ಟಮೋರೆಯ ಸುದ್ದಿಗಳು. ಪುಟ ಹಗೇ ತಿರುಗಿಸುತ್ತಾ ನಾಲ್ಕನೇ ಪುಟದಲ್ಲಿ ನಿನ್ನೆ ನೋಡಿದ್ದ ಅನಾಥಶವದ ಸುದ್ದಿ ಬಂದಿತ್ತು. ಕುತೂಹಲದಿಂದ ನೋಡಿದೆ. ಸುದ್ದಿಯ ಮೇಲೆ ಎರಡು ಛಾಯಚಿತ್ರಗಳು. ಒಂದು ಬೋರಲಾಗಿ ಮಲಗಿದ್ದ ನಗ್ನ ಅನಾಥಶವ ಮತ್ತೊಂದು! ಆ ಚಿತ್ರವನ್ನು ನೋಡಿ ನನಗೆ ಗಾಭರಿಯೂ ಆಯಿತು. ಮೂರು ವರ್ಷದ ಹಿಂದೆ ನಾವುಗಳು ಮತ್ತು ಇವನ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳಿಗೆ ಬೇರೆಯಾಗಿದ್ದೆವು. ಈ ಅನಾಥಶವ ಮೂರುವರ್ಷದ ಹಿಂದೆ ನಮ್ಮ ಸ್ನೇಹಿತನಾಗಿದ್ದ. ಅವನ ಹೆಸರು ಪ್ರಸನ್ನ.
ಭಾಗ - ೨
ಪ್ರಸನ್ನ - ಇವನ ಹೆಸರು ಸೂಚಿಸುವಂತೆ ಅವನ ಮೊಗವೂ ಹಾಹೆಯೇ ಇತ್ತು. ಸದಾ ಪ್ರಸನ್ನತಾ ಭಾವ ಹೊಂದಿರುವ ಮುಖ. ಹುಟ್ಟುತ್ತಲೇ ನಗುತ್ತ ಹುಟ್ಟಿದನೇನೋ ಎನ್ನುವಂತೆ. ನಾನು, ಪಚ್ಚಿ, ಚಾಮಿ, ತ್ಯಾಗ ಜೊತೆಗೆ ಇವನು ಸೇರಿ ಐದೂ ಜನ ಸದಾ ಒಟ್ಟಿಗೆ ಇರುತ್ತಿದ್ದೆವು. ನಮ್ಮನ್ನ ನೋಡಿದವರೆಲ್ಲಾ
``ಓಹ್ ನೋಡ್ರಪ್ಪೋ ಪಂಚಪಾಂಡವರು ಬಂದ್ರೂ'' ಎನ್ನುತ್ತಿದ್ದರು.
ಅಂತಹ ಗೆಳೆತನ. ಹೆಚ್ಚೂಕಡಿಮೆ ಪಾಂಡವರೇ. ಆದರೆ ದ್ರೌಪದಿ ಇರಲಿಲ್ಲ. ಶಾಲೆಯಲ್ಲಿ ಮಾತ್ರ ನಾಲ್ಕು ಘಂಟೆಗಳ ಕಾಲ ಬೇರೆ ಇರಲೇಬೇಕಿತ್ತು. ನಾನು ಒಂಭತ್ತನೆ ತರಗತಿ, ಚಾಮಿ ಎಂಟಾದರೆ ಅವರು ಮೂರೂ ಜನ ಹತ್ತನೇ ತರಗತಿ. ಶಾಲೆಯ ನಂತರ ಯಥಾಪ್ರಕಾರ ದ್ರೌಪದಿರಹಿತ ಪಂಚಪಾಂಡವರು ಒಟ್ಟಾಗುತ್ತಿದ್ದೆವು.
ಒಮ್ಮೆ ಹೀಗಾಯಿತು: ಪಚ್ಚಿ, ತ್ಯಾಗ ಮತ್ತು ಇವನು ಕ್ಲಾಸಿನಲ್ಲಿ ಕೂತಿದ್ದಾಗ ಈರಣ್ಣ ಮಾಸ್ತರು ಗಂಭೀರವಾಗಿ ಇವನನ್ನೇ ದಿಟ್ಟಿಸಿ ಕೇಳಿದರಂತೆ:
``ಏ ಭಕರಾ ನೆನ್ನೆ ಯಾಕೋ ಕ್ಲಾಸಿಗೆ ಅಟೆಂಡ್ ಆಗ್ಲಿಲ್ಲ. ಬಾಯ್ ಬಿಡೋ''
ತಕ್ಷಣ ಅದಕ್ಕವನು ``ಆ'' ಎಂದು ಬಾಯಿ ತೆಗೆದನಂತೆ. ಇಂಥ ತಂಟೆಗಳನ್ನು ಮಾಡಿದರೆ ಸಹಿಸದ ನಮ್ಮ ಈರಣ್ಣ ಮಾಸ್ತರು ಅಂದು ಅವನನ್ನು ನೋಡಿ ನಕ್ಕುಬಿಟ್ಟರಂತೆ. ಅವನು ಹೊರಗೆ ಬಂದಾಗ ಪಚ್ಚಿ ಮತ್ತು ತ್ಯಾಗ ಹೇಳಿದರು:
``ನಾವೆಲ್ಲ ಹಾಗ್ ಮಾಡಿದ್ರೆ ಕುಂಡೇ ಮೇಲೆ ಬರೇ ಬರೋ ಹಾಗೆ ಹೊಡೆಯೋ ಮಾಸ್ತರು ಇವನು ಹಾಗೆ ಮಾಡಿದ್ರೂ ಯಾಕೆ ಇವತ್ತು ನಕ್ಕದ್ದು?'' ಅಂತ.
ಅದಕ್ಕೆ ಅವನು ``ಏ ಅದು ಹಂಗಲ್ಲ ಕಣೋ. ಮೊನ್ನೆ ಮೂರು ದಿನ ಅವರು ಮನೇಗೆ ಬರ್‍ಲಿಲ್ವಲ್ಲಾ ಅದಕ್ಕೆ ನಾನು ಅವರ ಮನೆಗೆ ಹೋಗಿದ್ದೆ. ಎಕ್ಸಾಮ್ ಬೇರೆ ಹತ್ರ ಬಂದಿತ್ತಲ್ಲ ಸ್ವಲ್ಪ ಡೌಟ್ಸ್ ಇತ್ತು, ಕೇಳೋಣಾ ಅಂತ. ಹೋಗಿ ನೋಡಿದ್ರೆ ಪಾಪ ಬಹಳ ಜ್ವರ ಬಂದಿತ್ತು ಅದಕ್ಕೆ ನಾನು ಮನೇಗೆ ಹೋಗಿ ಅಮ್ಮನಿಗೆ ಹೇಳ್ದಾಗ ಅವರು ಸ್ವಲ್ಪ ಹಣ್ಣು ಬ್ರೆಡ್ಡು ಎಲ್ಲಾ ಕೊಟ್ಟು ಕಳ್ಸಿದ್ರು ಅದಕ್ಕೇ ಇರ್‍ಬೇಕು''
ಆಗ ಚಾಮಿ ಹೇಳಿದ ``ಓ ಹಾಗಾದ್ರೆ ನೆಕ್ಸ್ಟ್ ಟೈಮ್ ಅವರಿಗೆ ಜ್ವರ ಬಂದಾಗ ನಾನೂ ಹಂಗೇ ಮಾಡ್ತೀನಿ''
ಭಾಗ ೩
ದಿನಗಳು ಹಾಗೇ ಉರುಳಿದವು. ಎಲ್ಲರಿಗೂ - ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಜೀವನದಲ್ಲಿ ಹೇರಳವಾಗಿ ಹಣ ಸಂಪಾದಿಸುವ ಆಸೆ ಇದ್ದೇ ಇರುತ್ತದೆ. ಇದೇ ರೀತಿ ಅವನಿಗೂ ಇತ್ತು. ಅವರ ತಾಯಿಯಂತೂ ನಮ್ಮ ತಾಯಿಯ ರೀತಿಯೇ ಇದ್ದರು. ನಾವೇನೇ ಮಾಡಿದರೂ ನಮ್ಮ ಸಹಾಯಕ್ಕೆ ಬರುತ್ತಿದ್ದರು. ಎಂಥದ್ದೇ ಕಷ್ಟದ ಪರಿಸ್ಥಿತಿಯಲ್ಲಿ ಹೋಗಿ ಯಾವ ರೀತಿಯ ಸಹಾಯ ಕೇಳಿದರೂ ಮಾಡುತ್ತಿದ್ದರು. ಅವರ ತಂದೆ ದುಬೈ ದೇಶದ ಹೊಟೇಲೊಂದರಲ್ಲಿ ಮೇನೇಜರ್ ಆಗಿದ್ದರು. ವರ್ಷಕ್ಕೊಮ್ಮೆ ಬಂದಾಗಲೆಲ್ಲಾ ಏನಾದರೂ ಒಂದು ಉಡುಗೊರೆ ತರದಿದ್ದರೆ ಅವರಿಗೆ ಸಮಾಧಾನವೇ ಇರಲಿಲ್ಲ.
ಹಣದ ಹುಚ್ಚು ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇವನಿಗೆ ಅತಿ ಹೆಚ್ಚು ಹುಚ್ಚು. ಅಂಥ ಹುಚ್ಚು ನೋಡಿದ್ದೇನಾದರೂ ನಮ್ಮಲ್ಲಿ ಅಥವಾ ನಮಗೆ ಪರಿಚಯ ಇರುವವರಲ್ಲಿ ಇಂಥ ಹಣದ ಹುಚ್ಚಿನ ಹೊಳೆಯನ್ನು ಎಂದೂ ಕಂಡಿರಲಿಲ್ಲ ನಾವುಗಳು.
ಸ್ವಲ್ಪ ದಿವಸದ ನಂತರ ನಮ್ಮ ಕಾಲೇಜು ದಿನಗಳೂ ಮುಗಿದವು. ನನಗೆ ಇಂಡಿಯಾ ಇನ್ಫೋಲೈನ್ ಅನ್ನೋ ಕಂಪನಿಯಲ್ಲಿ, ಪಚ್ಚಿಗೆ ಅರ್ವಿನ್ ಮೆರಿಟಾರ್, ಚಾಮಿಗೆ ಡಾಯ್ಕಿನ್, ತ್ಯಾಗನಿಗೆ ವಿಪ್ರೋದಲ್ಲಿ ಕೆಲಸ ಸಿಕ್ಕಿತು. ಆಗಾಗ ಭೆಟ್ಟಿಯಾಗುತ್ತಿದ್ದೆವು., ಪಾರ್ಟಿ ಮಾಡುತ್ತಿದ್ದೆವು, ಟೂರ್ ಹೋಗುತ್ತಿದ್ದೆವು. ಆದರೆ ಅದು ಯಾವಾಗ ಅವನ ಸಂಪರ್ಕ ನಮ್ಮೊಟ್ಟಿಗೆ ಕಡಿದುಹೋಯಿತೋ ಏನೋ ನಮಗೆ ತಿಳಿಯಲಿಲ್ಲ. ಅವನಿಂದ ಒಂದು ದೂರವಾಣಿಯ ಕರೆಯೂ ಇಲ್ಲ. ನಾವೆಲ್ಲ ಚಿಂತೆಗೀಡಾದೆವು.
ಭಾಗ ೪
ಅವನ ತಾಯಿ ಒಮ್ಮಿಂದೊಮ್ಮೆಗೆ ಮೂರು ವರ್ಷಗಳ ನಂತರ ನಮಗೆ ಫೋನ್ ಮಾಡಿದರು. ಆ ಮೂರು ವರ್ಷಗಳು ಅವರು ದುಬೈನಲ್ಲಿ ಇದ್ದರು. ಬೆಂಗಳೂರಿಗೆ ಬಂದಿದ್ದರು. ಅವನೇ ಫೋನ್ ಮಾಡಿದ್ದನಂತೆ. ಅವರು ಬಂದಾಗ ಇವನಿಂದ ಬಹಳ ಬೇಸರದ ಸಂಗತಿ ಎದುರಾಗಿತ್ತು. ಅದು ಯಾವುದೋ ಗೊತ್ತಿಲ್ಲದ ಹುಡುಗಿಯನ್ನು ಮನೆಗೆ ಕರೆದುಕೊಂಡು ಬಂದು
``ನಾನು ಇವಳನ್ನೇ ಮದುವೆಯಾಗುವುದು. ಅದು ಏನು ಮಾಡ್ತಿಯೋ ಎನೋ ನನಗೆ ಗೊತ್ತಿಲ್ಲ. ಅಪ್ಪನ ಹತ್ತಿರ ನೀನೇ ಮಾತನಾಡಬೇಕು. ಇಲ್ಲಾಂದರೆ ನಾನು ಸಾಯುವುದು ಖಚಿತ ಎಂದುಬಿಟ್ಟನಂತೆ. ಅವನ ತಂದೆ ಜಾತಿಯನ್ನು ನೋಡುವುದು ಹೆಚ್ಚು. ``ತಮ್ಮ ಜಾತಿಯ ಹೆಣ್ಣನ್ನಲ್ಲದೆಬೇರೆ ಜಾತಿಯವಳನ್ನು ನಮ್ಮ ಮನೆ ಸೊಸೆಯನ್ನಾಗಿ ಕರೆತರಲು ನಾನು ಸುತರಾಂ ಒಪ್ಪೋಲ್ಲ'' ಎಂದು ಬಿಟ್ಟರಂತೆ.
ಅವನು ತಾಯಿಯನ್ನು ದಿನಾಗಲೂ ಪೀಡಿಸುತ್ತಲೇ ಇದ್ದ. ಅವನ ನಮ್ಮ ಹತ್ತಿರ ದಿನಾಗಲೂ ಬಂದು ಗೋಳಾಡುತ್ತಿದ್ದರು. ನಮಗೂ ಅವನ ಬಗ್ಗೆ ಬಹಳ ಬೇಸರವಾಯಿತು. ಅವನು ಯಾಕೆ ಹೀಗಾದ ಎಂದು. ಅವನನ್ನು ನಂತರ ನಾವು ಕಂಡು ಮಾತನಾಡಲು ಯತ್ನಿಸಿದೆವು. ಆದರೆ ಅವನು ನಮ್ಮನ್ನು ಕಣ್ಣೆತ್ತಿ ಸಹ ನೋಡದೆ ಹೊರಟುಹೋಗಿದ್ದ.
ಈ ವಿಷಯವನ್ನ ಈರಣ್ಣ ಮಾಸ್ತರ್ ಹತ್ತಿರ ಹೇಳಿ ಅವನಿಗೆ ಬುದ್ಧಿ ಹೇಳಿಸಬೇಕು ಎಂದುಕೊಂಡೆವು. ಯಾಕೆಂದರೆ ಅವರನ್ನು ಕಂಡರೆ ಅವನಿಗೆ ಬಹಳ ಗೌರವವಿತ್ತು. ಹಾಗಾಗಿ ಅವರ ಬಳಿ ಹೋಗಿ ಕೇಳಿದೆವು. ಅವರು ಎಂದರು
``ಈ ಎರಡು ದಿನದ ಮುಂಚೆ ಅವನ ತಾಯಿ ಬಂದು ಹೇಳಿದರು. ನಾನೂ ಅವನಿಗೆ ಬುದ್ಧಿ ಹೇಳಲು ನೋಡಿದೆ. ಆದರೆ ಅವನು ಇದು ನನ್ನ ವೈಯಕ್ತಿಕ ವಿಚಾರ ನೀವು ತಲೆಹಾಕಬೇಡಿ ಎಂದ. ಇನ್ನೇನು ಹೇಳಲಿ ನಾನು. ಎಲ್ಲಾದರೂ ಹಾಳಾಗಿಹೋಗಲಿ ಅಂತ ಸುಮ್ಮನಾದೆ''
ಇದಾದ ಸ್ವಲ್ಪ ದಿನಕ್ಕೇ ಅವನು ಅನಾಥಶವವಾಗಿದ್ದದ್ದು. ದಿನಪತ್ರಿಕೆಗಳಲ್ಲಿ ``ಬೀದಿಯಲ್ಲಿ ಬಿದ್ದ ಅನಾಥಶವ'' ಎಂದು ಸುದ್ದಿ ಬಂದದ್ದು.
ಭಾಗ ೫
ಈ ವಿಷಯವನ್ನು ನಾನು ಪಚ್ಚಿಗೆ ಫೋನ್ ಮಾಡಿ ಹೇಳಿ ಇಟ್ಟ ನಂತರ ತ್ಯಾಗ ಲಂಡನ್‍ನಿಂದ ಫೋನ್ ಮಾಡಿದ್ದ ಅವನಿಗೂ ವಿಷಯ ಮುಟ್ಟಿಸಿದೆ. ಅವನ ಬಹಳ ಬೇಸರದಿಂದ ಮಾತನ್ನೇ ಆಡದೇ ಫೋನಿಟ್ಟುಬಿಟ್ಟ. ಸ್ವಲ್ಪ ಸಮಯದ ನಂತರ ನನಗೆ ಪೊಲೀಸರಿಂದ ಫೋನ್ ಬಂತು. ಅವನ ಮನೆಯಲ್ಲಿ ನಮ್ಮ ಹೆಸರಿನಲ್ಲಿ ಒಂದು ಡೈರಿ ಸಿಕ್ಕಿದೆಯೆಂದು. ನಾನಲ್ಲಿಗೆ ಹೋದಾಗ ಪಚ್ಚಿ ಮತ್ತು ಚಾಮಿ ಇಬ್ಬರೂ ಬಂದಿದ್ದರು. ಅವರ ಹೆಸರಿನಲ್ಲೂ ಆ ಡೈರಿ ಇತ್ತು. ಅಷ್ಟರಲ್ಲಿ ಪೊಲೀಸೊಬ್ಬ ಬಂದು-
``ಇಲ್ಲಿ ತ್ಯಾಗ ಅನ್ನೋರು ಯಾರು ಅವರ್‍ಯಾಕೆ ಬಂದಿಲ್ಲ?''``ಇಲ್ಲ ಅವನು ಇಂಡಿಯಾದಲ್ಲಿ ಒಂದು ವರ್ಷದಿಂದ ಇಲ್ಲ. ಲಂಡನ್‍ನಲ್ಲಿ ಇದ್ದಾನೆ''``ಓ ಹೌದಾ? ಸರಿ ಇವತ್ತು ಸಂಜೆ ಬಾಡಿ ಪೋಸ್ಟ್‍ಮಾರ್ಟೆಮ್ ಆದ ನಂತರ ಆ ಬಾಡಿನ ತಗೊಂಡ್ ಹೋಗಿ. ಅವನ ತಂದೆ ತಾಯಿ ಯಾರೂ ಇಲ್ವಾ?''``ಇದ್ದಾರೆ ಸಾರ್, ದುಬೈ‍ನಲ್ಲಿ ಫೋನ್ ಮಾಡಿ ಕರೆಸುತ್ತೇವೆ''``ಸರಿ ನಾನಿನ್ನ ಹೊರಡ್ತೀನಿ'' ಪೊಲೀಸ್ ಹೋದ ನಂತರ ಆ ಡೈರಿಯನ್ನ ನಾವು ಓದಿದೆವು. ಒಂದು ರೀತಿಯ ಶಾಕಿಂಗ್ ಸುದ್ದಿಗಳನ್ನ ಅವನು ಬರೆದಿಟ್ಟಿದ್ದ.
* * * * * *
ತ್ಯಾಗ, ಪಚ್ಚಿ, ಚಾಮಿ ಮತ್ತು ಚೀನಿ,
ಈ ಡೈರಿ ಬರೆಯಲು ಹಲವರು ಕಾರಣಗಳಿವೆ. ನನ್ನ ಜೀವೆನದಲ್ಲಿ ಮಾಡಿದ ಅಪರಾಧಗಳು ಮನ್ನಿಸಲಾರದಂಥವು. ಹಣದ ವ್ಯಾಮೋಹಕ್ಕೆ ಬಿದ್ದಿದ್ದೆ ನಾನು. ಜೀವನದಲ್ಲಿ ಹೇರಳವಾಗಿ ಹಣ ಸಂಪಾದನೆ ಮಾಡಬೇಕು. ಚಿಟಿಕೆ ಹೊಡೆಯುವಷ್ಟರಲ್ಲಿ ನಾನು ಬಹುಕೋಟಿ ಸಾಹುಕಾರನಾಗಿ ನನ್ನ ತಾಯಿಯನ್ನು ಮತ್ತು ತಂದೆಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ನಾನು ಆಯ್ಕೆ ಮಾಡಿದ ಹಾದಿ ಬಹಳ ಅಪತ್ತಿನದಾಗಿತ್ತು.
ಫೈನಲ್ ಇಯರ್ ಡಿಗ್ರೀ ಮಾಡುತ್ತಿದ್ದಾಗ ನಾನು ನಿಮಗೆ ಸಿಗಲೇ ಇಲ್ಲ. ಆಗ ನಾನು ಮಾಡುತ್ತಿದ್ದದ್ದು ಡ್ರಗ್ಸ್ ವ್ಯಾಪಾರ. ನಮ್ಮ ಕಾಲೇಜೊಂದಕ್ಕೆ ಬಿಟ್ಟು ಬೇರೆ ಎಲ್ಲಾ ಇಂಜಿನಿಯರಿಂಗ್ ಕಾಲೇಜಿಗೂ ನಾನು ಡ್ರಗ್ಸ್ ಸಪ್ಲೈ ಮಾಡಲು ಶುರು ಮಾಡಿದೆ. ಇದಕ್ಕೆ ನನ್ನ ಒಂದು ತಿಂಗಳು ಇನಾಮು ಎಷ್ಟು ಗೊತ್ತೆ? ಎರಡೂವರೆ ಲಕ್ಷ ರೂಪಾಯಿ. ಹೀಗೆ ಒಂದು ವರ್ಷದಲ್ಲಿ ನಾನು ಲಕ್ಷಾದೀಶವರನಾದೆ. ನನಗೆ ಮತ್ತೂ ಹಣದ ವ್ಯಾಮೋಹ ಬೆಳೆಯಿತು. ಆಗ ನಾನು ನನ್ನ ಓದನ್ನು ಮುಗಿಸಿ ಮುಂಬೈ ಎಂಬ ಮಹಾನಗರಕ್ಕೆ ಹೊರಟುಹೋದೆ. ಅಲ್ಲಿ ನನಗೆ ರಾಜ ಮರ್ಯಾದೆ ಇತ್ತು.
ಇಲ್ಲೇ ಎರಡೂವರೆ ಲಕ್ಷ ಸಿಗುವಾಗ ಅಲ್ಲಿ ಎರಡರಷ್ಟು ಹೆಚ್ಚು. ಜೊತೆಜೊತೆಗೆ ತಲೆಹಿಡುಕನಾಗಿ ಹೋದೆ. ಬರುವ ಗಿರಾಕಿಗಳಿಗೆ ಹೆಣ್ಣನ್ನೊದಗಿಸುವ ಸೂಳೆಗಾರಿಕೆಗೆ ಇಳಿದುಬಿಟ್ಟೆ. ಕೊಲೆ ದರೋಡೆಗಳನ್ನು ಮಾಡಿಸಿದೆ. ನನಗೂ ಬೀದಿಸೂಳೆಯರ ಸಹವಾಸ ಶುರುವಾಯಿತು. ಇದೆಲ್ಲ ಕೆಲವೇ ದಿನಗಳು ಮಾತ್ರ. ಸ್ವಲ್ಪ ದಿವಸ ಆದ ಮೇಲೆ ನನಗೆ ಹುಷಾರು ತಪ್ಪು ಶುರುವಾಯಿತು. ಜ್ವರ ಬರುವುದು, ತಲೆನೋವು, ಹೊಟ್ಟೆನೋವು, ಅಸಾಧ್ಯ ಸುಸ್ತು. ನಂತರ ನಾನು ಡಾಕ್ಟರ್ ಬಳಿ ಹೋಗಿ ಎಲ್ಲಾ ಹೇಳಿದೆ. ಅವರು ರಕ್ತಪರೀಕ್ಷೆ ಮಾಡಿ ನನಗೆ ಬಂದಿರುವ ರೋಗಕ್ಕೆ ಸುಂದರವಾದ ಏಯ್ಡ್ಸ್ ಎಂಬ ಹೆಸರಿಟ್ಟು ಇನ್ನೂ ಸ್ವಲ್ಪ ದಿನ ಅಷ್ಟೇ ನನ್ನ ಜೀವನ ಎಂದು ಹೇಳಿದರು.
ನಿಮ್ಮನ್ನು ಆಗಾಗ ನೋಡಬೇಕು ಎನಿಸಿದರೂ, ಇವೆಲ್ಲಾ ಗೊತ್ತಾದರೆ ನೀವೆಲ್ಲಾ ಎಲ್ಲಿ ನನ್ನಿಂದ ದೂರ ಇರುತ್ತೀರೋ ಎಂಬ ಭಯದಿಂದ ನಿಮ್ಮಿಂದ, ಈರಣ್ಣ ಮಾಸ್ತರಿಂದ, ಅಪ್ಪ ಅಮ್ಮನಿಂದ ನಾನೇ ಕೆಟ್ಟವನ ಹಾಗೇ ನಡೆದುಕೊಳ್ಳುತ್ತಾ ದೂರ ಉಳಿಯಲು ಪ್ರಯತ್ನಿಸಿದೆ. ನನಗೆ ಗೊತ್ತು ನನ್ನ ಮೇಲೆ ನಿಮಗೆ ಬೇಸರ ಇದೆ. ನಾನು ಸಾಯುವುದು ಖಚಿತ ಎಂದು ನನಗೆ ಚೆನ್ನಾಗಿ ಗೊತ್ತು. ಆದರೆ ನನ್ನ ಸ್ನೇಹಿತರೆ ನನಗೊಂದೇ ಚಿಂತೆ. ನಾನು ಸತ್ತ ಬಳಿಕ ನನ್ನ ತಾಯಿಯನ್ನು ನೀವೇ ನೋಡಿಕೊಳ್ಳಬೇಕು. ನೋಡಿಕೊಳ್ಳುತ್ತೀರ ಎಂಬ ನಂಬಿಕೆ ನನಗೆ ಚೆನ್ನಾಗಿ ಇದೆ. ಪ್ರಾಣ ಇದ್ದರೆ ಖಂಡಿತ ನಿಮಗೆ ಮತ್ತೆ ಸಿಕ್ಕಿ ನಿಮ್ಮನ್ನು ಕ್ಷಮೆ ಬೇಡುತ್ತೇನೆ. ನಾನು ಅಷ್ಟರಲ್ಲಿ ಸತ್ತಿದ್ದರೆ ದಯಮಾಡಿ ನೀವೇ ಕ್ಷಮಿಸಿಬಿಡಿ.
ಇಂತೀ ನಿಮ್ಮವ
* * * * * *
ಇದು ಡೈರಿಯ ಸ್ವಲ್ಪ ಭಾಗ ಮಾತ್ರ. ಇದನ್ನು ನಾವು ಅವನ ತಾಯಿಗೆ ಫೋನ್ ಮಾಡಿ ಹೇಳಿದೆವು. ಅವರಿಂದ ಬಂದ ಉತ್ತರ: ``ಪೇಪರಲ್ಲೇ ಅನಾಥ ಶವ ಅಮ್ತ ಕೊಟ್ಟಿರಬೇಕಾದರೆ ಅವನ ಬಗ್ಗೆ ನಾವು ಏಕೆ ತಲೆಕೆಡಿಸಿಕೊಳ್ಳಬೇಕು. ಅವನು ಬದುಕಿದ್ದಾಗಲೇ ಸತ್ತಿದ್ದಾನೆ ಅಂದುಕೊಂಡಿದ್ದೆವು ಆದರೆ ಈಗ ನಿಜವಾಗಿಯೂ ಸತ್ತೇಹೋಗಿದ್ದಾನೆ. ನೀವುಗಳೇ ಅವನ ಅಣ್ಣಂದಿರು ಎಂದು ತಿಳಿದುಕೊಂಡು ಅವನ ಶವ ಸಂಸ್ಕಾರ ಮುಗಿಸಿಬಿಡಿ ನಿಮಗೆ ಪುಣ್ಯ ಬರುತ್ತದೆ.''
* * * * * *
ಶ್ರೀಚಂದ್ರ೩೦-೦೬-೦೭